24th December 2024
ಗಾಯಾಳುಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲು ಸಿಎಂ ಬಳಿ ಮನವಿ*
*-ಗೃಹ ಸಚಿವರಾದ ಡಾ.ಜಿ.ಪರಮೇಶ್ವರ*
ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಡಿ.24: ಹುಬ್ಬಳ್ಳಿಯ ಸಾಯಿನಗರದ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಅಡುಗೆ ಅನಿಲ (ಸಿಲಿಂಡರ್ ) ಸ್ಫೋಟಗೊಂಡು 9 ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದೇ ಗಾಯಾಳುಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗುವುದು ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಹೇಳಿದರು.
ಇಂದು ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ( ಕೆಎಂಸಿ&ಆರ್ಐ ) ಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಈ ಘಟನೆ ಬಗ್ಗೆ ವಿಷಾದವನ್ನು ವ್ಯಕ್ತಪಡಿಸುತ್ತೇನೆ. 9 ಅಯ್ಯಪ್ಪ ಮಾಲಾಧಾರಿಗಳ ಪೈಕಿ ಪ್ರಕಾಶ ಬಾರಕೇರ ಅವರ ದೇಹ ಶೇ.90 ರಷ್ಟು ಸುಟ್ಟಿದೆ. ಅವರಿಗೆ ಹೆಚ್ಚಿನ ಕಾಳಜಿ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಉಳಿದ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸಂಸ್ಥೆಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಸಹ ಕೆಎಂಸಿಆರ್ಐಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಲಿದ್ದಾರೆ. ಪರಿಹಾರ ನೀಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಈ ಘಟನೆ ಬಗ್ಗೆ ತನಿಖೆಯಾಗಲಿದೆ ಎಂದರು.
*ಕೆಎಂಸಿಆರ್ಐ ನಿರ್ದೇಶಕರ ನೇಮಕಕ್ಕೆ ಕ್ರಮ*
ಕೆಲವು ತಿಂಗಳುಗಳಿಂದ ಕೆಎಂಸಿಆರ್ಐ ಸಂಸ್ಥೆಯ ಪ್ರಭಾರ ನಿರ್ದೆಶಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಖಾಯಂ ನಿರ್ದೇಶಕರ ನೇಮಕಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಸುಮಾರು ಏಳು ಜಿಲ್ಲೆಗಳ ಅತ್ಯಂತ ಕಠಿಣ ಪ್ರಕರಣಗಳು ಕೆಎಂಸಿಆರ್ಐಗೆ ಬರುತ್ತವೆ. ಈ ಭಾಗದ ಸಂಜೀವಿನಿಯಾಗಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಚಿಕಿತ್ಸೆ ನೀಡುವಲ್ಲಿ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಸಹ ಆಗಿವೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಬ್ಬಯ್ಯ ಪ್ರಸಾದ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ. ಆರ್.ಜೆ., ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್., ಕೆಎಂಸಿಆರ್ಐ ನಿರ್ದೇಶಕರಾದ ಡಾ.ಎಸ್.ಎಫ್.ಕಮ್ಮಾರ, ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಕಲಗೌಡ ಪಾಟೀಲ ಸೇರಿದಂತೆ ಅಧಿಕಾರಿಗಳು ಇತರರು ಹಾಜರಿದ್ದರು.